1
ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ I ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ II
2
ಅವರು ಒಣಗಿಹೋಗುವರು ಕಾಡುಗರಿಕೆಯಂತೆ I ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ II
3
ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು I ಸುರಕ್ಷಿತನಾಗಿ ಬಾಳು ಸಿರಿನಾಡಿನಲ್ಲಿದ್ದು II
4
ಪ್ರಭುವಿನಿಂದಲೆ ಬಯಸು ನಿನ್ನಾನಂದವನು I ನೆರವೇರಿಸುವನಾತ ನಿನ್ನ ಮನದಾಸೆಯನು II
5
ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I ಭರವಸೆಯಿಂದಿರು, ಆತನದನು ಸಾಗಿಸುವನು II
6
ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ I ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ II
7
ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II
8
ಅಡಗಿಸು ಕೋಪವನು; ವರ್ಜಿಸು ಕ್ರೋಧವನು I ಕಿಡಿಕಿಡಿಯಾಗಬೇಡ, ತರುವುದದು ಕೇಡನು II
9
ವಧಿತರಾಗಿ ನಾಶವಾಗುವರು, ಕೇಡು ಮಾಡುವವರು I ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು II
10
ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II
11
ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ I ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ II