Posted on 2021-06-072021-06-18 by ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ ಬಳಿಕ ಯೇಸು ಸ್ವಾಮಿ ಜನರನ್ನು ಮತ್ತೊಮ್ಮೆ ಕಂಡು ಹೀಗೆಂದರು: “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.” ಯೊವಾನ್ನ 8:12 ಕಾಣಿಸಿತೊಂದು ಮಹಾಜ್ಯೋತಿ ಕತ್ತಲಲಿ ಸಂಚರಿಸುತ್ತಿದ್ದ ಜನರಿಗೆ ಪ್ರಜ್ವಲಿಸಿತಾ ಜ್ಯೋತಿ ಕಗ್ಗತ್ತಲಲಿ ಬಾಳುತ್ತಿದ್ದಾ ನಾಡಿಗರಿಗೆ. ಯೆಶಾಯ 9:2 ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I ನಾನಾರಿಗೂ ಅಳುಕೆನು II ನನ್ನ ಬಾಳಿಗಾಧಾರ ಪ್ರಭುವೆ I ನಾನಾರಿಗೂ ಅಂಜೆನು II ಕೀರ್ತನೆಗಳು 27:1 “ಕತ್ತಲೆಯಿಂದ ಬೆಳಕು ಹೊಳೆಯಲಿ,” ಎಂದ ದೇವರೇ, ತಮ್ಮ ಜ್ಯೋತಿಯಿಂದ ನಮ್ಮ ಅಂತರಂಗವನ್ನು ಬೆಳಗಿಸಿದ್ದಾರೆ. ಇದರ ಪರಿಣಾಮವಾಗಿ ಕ್ರಿಸ್ತಯೇಸುವಿನ ಮುಖಮಂಡಲದಲ್ಲಿ ಪ್ರಜ್ವಲಿಸುತ್ತಿರುವ ದೇವರ ಮಹಿಮೆಯ ದಿವ್ಯಜ್ಞಾನವು ನಮ್ಮಲ್ಲಿ ಉದಯಿಸುವಂತಾಗಿದೆ. 2 ಕೊರಿಂಥಿಯರಿಗೆ 4:6 ಆದರೆ ಕ್ರಿಸ್ತಯೇಸು ನಿಮ್ಮಲ್ಲಿ ವಾಸಿಸಿದರೆ, ಪಾಪದ ನಿಮಿತ್ತ ನಿಮ್ಮಶರೀರ ಮರಣಕ್ಕೆ ಗುರಿಯಾಗಿದ್ದರೂ ನೀವು ದೇವರೊಡನೆ ಸತ್ಸಂಬಂಧವನ್ನು ಪಡೆದಿರುವುದರಿಂದ ಪವಿತ್ರಾತ್ಮ ನಿಮಗೆ ಜೀವಾಳವಾಗಿರುತ್ತಾರೆ. ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು. ರೋಮನರಿಗೆ 8:10-11 ನೀವು ಹಿಂದೊಮ್ಮೆ ಕತ್ತಲುಮಯವಾಗಿದ್ದಿರಿ. ಈಗಲಾದರೋ ಪ್ರಭುವಿನಲ್ಲಿ ಬೆಳಕಾಗಿದ್ದೀರಿ. ಆದ್ದರಿಂದ ಬೆಳಕಿನ ಮಕ್ಕಳಾಗಿ ಬಾಳಿರಿ. ಎಫೆಸಿಯರಿಗೆ 5:8 ಬದಲಿಗೆ, ದೇವರು ಬೆಳಕಿನಲ್ಲಿರುವಂತೆ ನಾವೂ ಬೆಳಕಿನಲ್ಲಿ ನಡೆದರೆ ನಮ್ಮಲ್ಲಿ ಪರಸ್ಪರ ಅನ್ಯೋನ್ಯತೆ ಇರುತ್ತದೆ. ಆಗ ದೇವರ ಪುತ್ರನಾದ ಯೇಸುವಿನ ರಕ್ತವು ನಮ್ಮನ್ನು ಎಲ್ಲ ಪಾಪದಿಂದಲೂ ಶುದ್ಧಗೊಳಿಸುತ್ತದೆ. ನಮ್ಮಲ್ಲಿ ಪಾಪವಿಲ್ಲವೆಂದು ನಾವು ಹೇಳಿಕೊಂಡರೆ, ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತೇವೆ ಮತ್ತು ಸತ್ಯವೆಂಬುದೇ ನಮ್ಮಲ್ಲಿ ಇರುವುದಿಲ್ಲ. ಪ್ರತಿಯಾಗಿ, ನಮ್ಮ ಪಾಪಗಳನ್ನು ಒಪ್ಪಿಕೊಂಡರೆ, ಆಗ ನಂಬಿಕಸ್ಥರೂ ನೀತಿವಂತರೂ ಆದ ದೇವರು ನಮ್ಮ ಪಾಪಗಳನ್ನು ಕ್ಷಮಿಸಿ ಎಲ್ಲಾ ಅನೀತಿ – ಅಧರ್ಮಗಳಿಂದ ನಮ್ಮನ್ನು ಶುದ್ಧೀಕರಿಸುತ್ತಾರೆ. 1 ಯೊವಾನ್ನನು 1:7-9 “ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.” ಮತ್ತಾಯ 5:14-16 ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ. ಯೊವಾನ್ನ 1:5